Monday, 26 July 2021

ಸ್ವರ್ಣ ಪ್ರಾಶನ ಮಹತ್ವ

  

ಅಪಾಯ ಎದುರಾಗುವ ಮುನ್ನ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂಬುದು ಲೋಕರೂಢಿಯಾಗಿರುವ ಮಾತಾಗಿದೆ. ಇದರರ್ಥವೇನೆಂದರೆ ಅಪಾಯ ಬಂದ ಮೇಲೆ ಎದುರಿಸುವ ಬದಲಿಗೆ ಅಪಾಯ ಎದುರಾಗುವ ಮುನ್ನವೇ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸುರಕ್ಷಿತವಾಗಿರುವುದು ಎಂದಾಗಿದೆ.

ಆಯುರ್ವೇದ ವೈದ್ಯ ಪದ್ಧತಿ ಭಾರತದ ಪುರಾತನ ಪದ್ಧತಿಯಾಗಿದೆ. ಇದಕ್ಕೆ ಸುಮಾರು ಸಾವಿರಾರು ವರ್ಷಗಳ ಇತಿಹಾಸವೂ ಇದೆ. ಆಯುರ್ವೇದದ ಮೂಲೋದ್ಧೇಶವೇ ಸ್ವಾಸ್ಥ್ಯ ರಕ್ಷಣೆ.  ಶಾಸ್ತ್ರದಲ್ಲಿ ಉಲ್ಲೇಖಿಸಿದ ಆಹಾರ ಜೀವನ ಶೈಲಿಯ ಪಾಲನೆ ಮಾಡದಿದ್ದರೆ ವ್ಯಕ್ತಿ ಅಸ್ವಸ್ಥನಾಗಿ ಚಿಕಿತ್ಸೆ ಪಡೆಯುವಂತೆ ಆಗುತ್ತದೆ. ಆಯುರ್ವೇದವೆಂಬುದು ನಮ್ಮ ಜೀವನದ ಪ್ರಮುಖ ಸೂತ್ರವಾಗಿದ್ದು ಇದರಲ್ಲಿ ಹೇಳಿರುವ ಅಂಶಗಳನ್ನೇ ನಾವು ನಿತ್ಯದ ಜೀವನದಲ್ಲಿ ಅಳವಡಿಸುತ್ತಿದ್ದೇವೆ. ಮನುಷ್ಯನ ಯಾವುದೇ ರೀತಿಯ ಕಾಯಿಲೆಗಳಿಗೆ ಆಯುರ್ವೇದವು ಉತ್ತಮ ತಿಳುವಳಿಕೆಯನ್ನು ಪರಿಹಾರವನ್ನು ನೀಡುತ್ತದೆ. ಪ್ರಕೃತಿಯಲ್ಲಿ ದೊರೆಯುವ ಸರಳ ಔಷಧಗಳನ್ನೇ ನಾವು ಆಯುರ್ವೇದದಲ್ಲಿ ಕಂಡುಕೊಳ್ಳಬಹುದು. ದೇಶದ ಅನೇಕ ಕಾಡು-ಮೇಡು, ಬೆಟ್ಟ-ಗುಡ್ಡಗಳಲ್ಲಿ ಜೀವ ರಕ್ಷಕ ಗಿಡಮೂಲಿಕೆಗಳು ಈಗಲೂ ಇವೆ. ಇಂತಹ ವಿಸ್ತಾರ ಪರಿಧಿಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ಮಕ್ಕಳಿಗೆ `ಸ್ವರ್ಣ ಬಿಂದು' ಪ್ರಾಶನ ಮಾಡಿಸುವುದು ಒಂದು ವಿಶಿಷ್ಟ ಪದ್ಧತಿಯಾಗಿದೆ. ಸ್ವರ್ಣ ಎಂದರೆ ಚಿನ್ನ, ಪ್ರಾಶನ ಎಂದರೆ ಸೇವನೆ ಎಂದು ಎಲ್ಲರಿಗೂ ತಿಳಿದಿದೆ. ಸನಾತನ ಭಾರತದ ಆರೋಗ್ಯ ಮತ್ತು ಇತರೆ ಶಾಸ್ತ್ರ ಗ್ರಂಥಗಳಾದ ಕಾಶ್ಯಪ ಸಂಹಿತ, ವೃದ್ದ ಜೀರಕ ತಂತ್ರ, ಮನುಸ್ಮೃಿಯಲ್ಲಿ ಸ್ವರ್ಣ ಪ್ರಾಶನ ಉಲ್ಲೇಖ ಇದೆ.
ಕಾಶ್ಯಪ ಸಂಹಿತೆ ಎಂಬುದು ಮಕ್ಕಳ ಆರೋಗ್ಯದ ಮಾಹಿತಿ ಇರುವ ಪ್ರಮುಖ ಆಯುರ್ವೇದ ಗ್ರಂಥವಾಗಿದೆ. ಇದರಲ್ಲಿ ಸ್ವರ್ಣ ಪ್ರಾಶದ ಬಗ್ಗೆ ವಿವರವಾದ ಮಾಹಿತಿ ಇದೆ.

ಸುವರ್ಣ ಪ್ರಾಶನಮ್ ಹಿ ಏತತ್ ಮೇಧಾಗ್ನಿಬಲವರ್ಧನಮ್ |
 ಆಯುಷ್ಯಮ್ ಮಂಗಳಂ ಪುಣ್ಯಂ ವೃಶ್ಯಮ್ ಗ್ರಹಾಪಹಮ್ ||
(ಕಾಶ್ಯಪ ಸೂತ್ರ ಸ್ತಾನ ೧೮/ ೪-೫)

ಸ್ವರ್ಣಪ್ರಾಶನದಿಂದಾಗುವ ಉಪಯೋಗಗಳನ್ನು ಈ ರೀತಿಯಾಗಿ ಕಾಶ್ಯಪ ಸಂಹಿತೆಯಲ್ಲಿ ವರ್ಣಿಸಲಾಗಿದೆ – 
1) ಮೇಧಾ ಎಂದರೆ ಬುದ್ಧಿ ಮತ್ತೆ ಹೆಚ್ಚಿಸುವುದು, 
2) ಜಠರಾಗ್ನಿ, ದೇಹದ ಬಲ ಮತ್ತು ಆಯುಷ್ಯ ವರ್ಧಿಸುವುದು.
3)  ಸ್ವರ್ಣಪ್ರಾಶನವು ಮಂಗಳಕರ ವಾಗಿದ್ದು ಭವಿಷ್ಯದಲ್ಲಿ ಉತ್ತಮ ಸಂತಾನ ಹೊಂದಲು ಸಹಕಾರಿಯಾಗಿದೆ.
4)  ಇದು ಚರ್ಮಕಾಂತಿ ಹೆಚ್ಚಿಸುತ್ತದೆ ಹಾಗೂ ಗ್ರಹ ಬಾಧೆಗಳು (ಪೋಲಿಯೊ, ದಡಾರ ಗಳ೦ತಹ ವೈರಸಿನಿ೦ದ ಬರುವ ಖಾಯಿಲೆಗಳು) ಬರದ೦ತೆ ತಡೆಯುತ್ತದೆ. 
5) ಪದೇ-ಪದೇ ಕಾಡುವ ರೋಗಗಳನ್ನು ತಡೆಗಟ್ಟಬಹುದು
6) ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ



ಆಯುರ್ವೇದದ ಪ್ರಕಾರ ಹದಿನಾರು ವರ್ಷದ ವರೆಗೆ ಮಕ್ಕಳ ವಯಸ್ಸನ್ನು ಬಾಲ್ಯ ಎಂದು ಉಲ್ಲೇಖಿಸಲಾಗಿದೆ. ಆದರೆ ಹನ್ನೆರಡರ ನಂತರ ಮಕ್ಕಳು ಹದಿಹರೆಯವನ್ನು ತಲುಪುವ ಕಾರಣ ಹುಟ್ಟಿದ ಮಗುವಿನಿ೦ದ ೧೨ ವರ್ಷದ ತನಕ ಮಕ್ಕಳಲ್ಲಿ ಸ್ವರ್ಣ ಪ್ರಾಶನ ಮಾಡಿಸಬೇಕು. ಮಕ್ಕಳ ಧಾತುಗಳ ಬೆಳವಣಿಗೆಯ ಕಾಲಘಟ್ಟದಲ್ಲಿ ಸ್ವರ್ಣ ಪ್ರಾಶನ ಮಾಡಿಸುವುದರಿಂದ ಮಕ್ಕಳ ಧಾತುಗಳ ಪೋಷಣೆ ಸರಿಯಾಗಿ ಆಗುವುದಕ್ಕೆ ಸಹಕಾರಿ.

ಮಕ್ಕಳ ಆರೋಗ್ಯ ಪೋಷಣೆಯಲ್ಲಿ ಜಾತಕರ್ಮ ಸಂಸ್ಕಾರ ಅತ್ಯಂತ ಪುರಾತನ ಪದ್ಧತಿ. ಮಗು ಹುಟ್ಟಿದ ನಂತರ ವೈದ್ಯರು ಆಗಿನ ಕಾಲದಲ್ಲಿ ಮಗುವಿಗೆ ಸ್ವರ್ಣ ಬಸ್ಮ ಅಂದರೆ ಶೋದಿತ ಚಿನ್ನದ ಭಸ್ಮವನ್ನು ಶುದ್ಧ ಜೇನುತುಪ್ಪ ಮತ್ತು ಹಸುವಿನ ತುಪಪದೊಂದಿಗೆ ಕೊಡುತ್ತಿದ್ದರು. 

ಪ್ರತಿ ತಿಂಗಳು ಪುಷ್ಯ ನಕ್ಷತ್ರವನ್ನು ಸ್ವರ್ಣ ಪ್ರಾಶನ ಮಾಡಿಸುವ ಪ್ರಕ್ರಿಯೆಗೆ ಪ್ರಶಸ್ತ ಎಂದು ಪರಿಗಣಿಸಲಾಗಿದೆ. ಆಯುರ್ವೇದ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂದು ಔಷಧಿಗಳಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ.
ಸ್ವರ್ಣ ಪ್ರಾಶನದಲ್ಲಿ ಹೆಚ್ಚಾಗಿ ಶೋಧಿಸಿದ ಚಿನ್ನದ ಭಸ್ಮ ಅಲ್ಲದೇ ಜೇನು ತುಪ್ಪ, ಬ್ರಾಹ್ಮಿ, ಅಮೃತ ಬಳ್ಳಿ ಮುಂತಾದ ಗಿಡ ಮೂಲಿಕೆಗಳಿಂದ ತಯಾರಿಸಿದ ತುಪ್ಪವನ್ನು ಬಳಸಲಾಗುತ್ತದೆ. ಭೂಮಿಯಲ್ಲಿ ದೊರಕುವ ಖನಿಜವಾದ ಚಿನ್ನದಲ್ಲಿ ಮನುಷ್ಯನ ಆರೋಗ್ಯ ಕಾಪಾಡುವ ಹಾಗೂ ಆತನ ದೇಹವನ್ನು ಸಮರ್ಪಕವಾಗಿ ಇಡುವ ಶಕ್ತಿ ಇದೆ. ಆದರೆ ಚಿನ್ನವನ್ನು ನೇರವಾಗಿ ಇರುವ ರೂಪದಲ್ಲಿಯೇ ಸೇವಿಸಲು ಆಗುವುದಿಲ್ಲ. ಏಕೆಂದರೆ ದೇಹವು ಅದನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಚಿನ್ನವನ್ನು ಅತ್ಯುನ್ನತ ಶಾಖದಲ್ಲಿ ಕರಗಿಸಿ , ಶೋದಿಸಿ ಸಂಸ್ಕಾರ ಮಾಡಿದ ಭಸ್ಮ ರೂಪವಾಗಿಸಿ ಇತರೆ  ಗಿಡಮೂಲಿಕೆಗಳ ಜೊತೆ ಕೊಡಬೇಕು. ಅಲ್ಲದೆ ಇದನ್ನು ಧುತ್ತೆಂದು ಯುವಕರಿಗೆ ಕೊಡಲು ಆಗುವುದಿಲ್ಲ. ಎಳೆಯ ಹಸುಳೆಗಳಿಗೆ ಹಂತ-ಹಂತವಾಗಿ ಹನಿ-ಹನಿಯಾಗಿ ನೀಡಬೇಕು.
ಮಕ್ಕಳ ವಯಸ್ಸಿಗೆ ತಕ್ಕಂತೆ ೨ ಹನಿಯಿಂದ ೧೦ ಹನಿಗಳವರೆಗೆ ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಮಕ್ಕಳಿಗೆ ಸ್ವರ್ಣ ಪ್ರಾಶನ ಮಾಡಿಸುವ ವಾಡಿಕೆ ಇದೆ.
ಅನೇಕ ಪ್ರತಿಷ್ಠಿತ ಆಯುರ್ವೇದ ಸಂಸ್ಥೆಗಳಲ್ಲಿ ಈ ವಿಷಯವಾಗಿ ವೈಜ್ಞಾನಿಕ ಅಧ್ಯಯನ ನಡೆದು ಉತ್ತಮ ಫಲಿತಾಂಶವು ದೊರಕಿದೆ.
ಶ್ರೀ ಧರ್ಮಸ್ಥಳ ಕಾಲೇಜ್ ಹಾಸನ ಹಾಗೇ ಗುಜರಾತ ನ ಏಕಲ ವಿದ್ಯಾಮಂದಿರದ ಮಕ್ಕಳ ೧೦ ವರ್ಷಗಳ ಸ್ವರ್ಣ ಪ್ರಾಶನದ ಫಲಿತಾಂಶ ಹೀಗೆ ಬಂದಿದೆ-
ಆರೋಗ್ಯದಲ್ಲಿ ಅಭಿವೃದ್ಧಿ - ೯೬% 
ಆಸ್ಪತ್ರೆಗೆ ಒಮ್ಮೆಯೂ ದಾಖಲಾಗದ ಮಕ್ಕಳು - ೯೪%
ಸ್ವರ್ಣ ಪ್ರಾಶನ ಮಾಡಿಸದ ಮಕ್ಕಳಿಗಿಂತ ಉತ್ತಮ ಆರೋಗ್ಯ - ೭೦%
ಕೋವಿಡ್ ಬಂದ ಕುಟುಂಬಗಳಲ್ಲಿ ಸೋಂಕಿತ ಮಕ್ಕಳು - ೪%
ಈ ರೀತಿಯಾಗಿ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಉತ್ತಮಕೊಂಡು ಶ್ರೇಷ್ಠ ಸಮಾಜ ನಿರ್ಮಾಣಕ್ಕೆ ನಾಂದಿ ಯಾಗುತಾರೆ.
             ಸರ್ವೇ ಸಂತು ನಿರಾಮಯಂ

ವೈದ್ಯ ಅರವಿಂದ್
ಆಯುರ್ವೇದ ವೈದ್ಯ
ಆರೋಗ್ಯ ಭಾರತಿ
ತುಮಕೂರು
9008115952